 ಗಜ್ಜುಗದ ಗಿಡ 
ಲೆಗ್ಯೂಮಿನಿನೋಸೀ ಕುಟುಂಬದ ಸೀಸಾಲ್‍ಪಿನಿ ಉಪಕುಟುಂಬಕ್ಕೆ ಸೇರಿದ ಒಂದು ಮುಳ್ಳು ಪೊದರು ಗಿಡ. ಸಾಮಾನ್ಯವಾಗಿ ತನ್ನ ಮುಳ್ಳುಗಳ ಸಹಾಯದಿಂದ ಬೇರೆ ಸಸ್ಯಗಳನ್ನು ಅಡರಿಕೊಂಡು ಬೆಳೆಯುತ್ತದೆ. ಸೀಸಾಲ್‍ಪಿನಿಯ ಬೊಂಡುಸೆಲ ಇದರ ವೈಜ್ಞಾನಿಕ ಹೆಸರು. ಸಾಮಾನ್ಯವಾಗಿ ಇಂಗಿಷಿನಲ್ಲಿ ಫೀವರ್ ನಟ್, ನಿಕಾರ್, ಬೀನ್, ಬೊಂಡುಕ್ ನಟ್ ಎಂದು ಕರೆಯುತ್ತಾರೆ.

	ಪ್ರಪಂಚದ ಉಷ್ಣವಲಯಗಳಲ್ಲೆಲ್ಲ ಹರಡಿರುವ ಇದು ಬಯಲುಪ್ರದೇಶಗಳಲ್ಲಿ ಹಾಳುಬಿದ್ದ ನೆಲ ಮತ್ತು ಬೇಲಿ ಮುಂತಾದೆಡೆ ಬೆಳೆಯುತ್ತದೆ. ಸಮುದ್ರತೀರ ಹಾಗೂ ನದೀದಡಗಳು ಇದರ ಅಚ್ಚುಮೆಚ್ಚಿನ ಜಾಗಗಳು. ಬೆಟ್ಟಗಾಡುಗಳಲ್ಲಿ ಬೆಳೆಯುತ್ತದಾದರೂ 2500' ಗಳಿಗೆ ಮೇಲ್ಪಟ್ಟ ಪ್ರದೇಶಗಳಲ್ಲಿ ಹೆಚ್ಚಾಗಿ ಕಾಣಬರುವುದಿಲ್ಲ.

	ಬೂದುಬಣ್ಣದ ರೆಂಬೆಗಳು. 1'-2' ಉದ್ದದ ಗರಿರೂಪದ ಸಂಯುಕ್ತ ಮಾದರಿಯ ಎಲೆಗಳು. ಕಾಂಡದ ಮೇಲೆಲ್ಲ ಎದ್ದಿರುವ ಗಡುಸಾದ. ಚೂಪಾದ, ಮುಳ್ಳುಗಳು ಗಜ್ಜುಗದ ಗಿಡದ ಕೆಲವು ಮುಖ್ಯ ಲಕ್ಷಣಗಳು ಹೂಗೊಂಚಲು ರೆಸೀಮ್ ಮಾದರಿಯದು. ಗೊಂಚಲಿಗೆ 6-10 ಉದ್ದದ ತೊಟ್ಟಿದೆಯಾಗಿ ಅದು ರೆಂಬೆಗಳಿಂದ ಇಳಿಬಿದ್ದಿರುತ್ತದೆ. ಪ್ರತಿ ಹೂವಿನಲ್ಲಿ 5 ಪತ್ರಗಳು, 5 ಬಿಡಿದಳಗಳು, ಬಿಡಿಬಿಡಿಯಾದ 10 ಕೇಸರಗಳು. ಒಂದೇ ಕಾರ್ಪೆಲಿನಿಂದ ಕೂಡಿದ ಉಚ್ಚಸ್ಥಾನದ ಅಂಡಾಶಯ ಇವೆ. ಫಲ ಪಾಡ್ ಮಾದರಿಯದು ; 1-3 ಬೀಜಗಳನ್ನೊಳಗೊಂಡಿದೆ. ಬೀಜವೇ ಗಜ್ಜುಗ. ಬೀಜದ ಹೊರಮೈ ಬಲು ನಯವಾಗಿ, ಹೊಳಪುಳ್ಳದ್ದಾಗಿ, ಗಟ್ಟಿಯಾಗಿ ಇವೆ. ಇದರ ಬಣ್ಣ ಬೂದು.

	ಗಜ್ಜುಗದ ಗಿಡದ ಉಪಯೋಗಗಳು ಹಲವಾರು. ಇದರ ಎಳೆಯ ಎಲೆಗಳನ್ನು ಯಕೃತ್ತಿನ ವ್ಯಾಧಿಗಳನ್ನು ನಿವಾರಿಸಲು ಉಪಯೋಗಿಸುತ್ತಾರೆ. ಎಲೆಯಿಂದ ತಯಾರಿಸಿದ ಲೇಪವನ್ನು ಹಲ್ಲುನೋವಿಗೆ ಬಳಸುವುದಿದೆ. ಊತಗಳನ್ನು ಇಳಿಸಲು ಎಲೆ ಮತ್ತು ಬೀಜಗಳನ್ನು ಬಳಸುತ್ತಾರೆ. ಎಲೆ ಮತ್ತು ತೊಗಟೆಗಳಿಗೆ ಜಂತುನಾಶಕ, ವಾಂತಿಕಾರಕ, ಜ್ವರಶಾಮಕ ಗುಣಗಳಿವೆ. ಬೀಜದಿಂದ ತೆಗೆಯುವ ಎಣ್ಣೆಯನ್ನು ಮುಖದ ಮೇಲೆ ಮೂಡುವ ನಸುಗಂದು ಬಣ್ಣದ ಮಚ್ಚೆಗಳನ್ನು ನಿವಾರಿಸುವುದಕ್ಕೂ ಕಿವಿಯಿಂದ ಸೋರುವ ಕೀವನ್ನು ನಿಲ್ಲಿಸುವುದಕ್ಕೂ ಉಪಯೋಗಿಸುವುದುಂಟು. ಸಂಧಿವಾತ, ಜ್ವರ, ಬಿಟ್ಟು ಬಿಟ್ಟು ಬರುವ ಗೊರಲು, ಸಾಮಾನ್ಯ ದುರ್ಬಲತೆ ಮುಂತಾದ ಕಾಯಿಲೆಗಳಿಗೆ ಈ ಎಣ್ಣೆ ಸಿದ್ಧೌಷಧ ಎನ್ನುತ್ತಾರೆ. ಹುರಿದ ಬೀಜ ಕುಷ್ಠರೋಗಕ್ಕೆ ಒಳ್ಳೆಯ ಮದ್ದು ಎನ್ನಲಾಗಿದೆ. ಬೀಜದಿಂದ ಬಲವರ್ಧಕ ಮತ್ತು ಕಾಂತಿವರ್ಧಕ ಔಷಧಿಗಳನ್ನು ತಯಾರಿಸುತ್ತಾರೆ.						(ಕೆ.ಎಂ.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ